ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಕಾಳಿಂಗ ಎಂಬ ಚಿಕ್ಕಪ್ಪಯ್ಯನ ನೆನಪಲ್ಲಿ

ಲೇಖಕರು :
ಎ.ಮುರಳೀಧರ ನಾವಡ
ಮ೦ಗಳವಾರ, ಆಗಸ್ಟ್ 11 , 2015

ಅವರು ಬದುಕಿದ್ದು ಕೇವಲ ಮೂವತ್ತೆರಡು ವರ್ಷ ಮಾತ್ರ. ಭೌತಿಕವಾಗಿ ನಮ್ಮನ್ನಗಲಿ ಈಗ 25 ವರ್ಷಗಳೇ ಕಳೆದಿವೆಯೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಅಂತಹ ಅಳಿಸಲಾಗದ ನೆನಪನ್ನು ಯಕ್ಷಗಾನ ರಂಗದಲ್ಲಿ ಹಾಗೂ ಪ್ರೀತಿಪಾತ್ರರಲ್ಲಿ ಉಳಿಸಿ ಹೋದವರು ಕಾಳಿಂಗ ನಾವಡ. ಈ ಹೆಸರು ಕೇಳುತ್ತಿದ್ದ ಹಾಗೆ ಯಕ್ಷಗಾನ ಪ್ರಿಯರ ಮೈ-ಮನ ರೋಮಾಂಚಗೊಳ್ಳುತ್ತದೆ. ಅಂತಹ ಅದ್ಭುತ ಕಂಚಿನ ಕಂಠದಿಂದ ಯಕ್ಷಗಾನ ಭಾಗವತರಾಗಿ ಅವರು ಜನಪ್ರಿಯರಾದವರು. ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ. ಇಂತಹ ಕಲಾವಿದನ ಮನೆಯ ಕುಟುಂಬದ ಸದಸ್ಯನಾಗಿರುವುದು ನನಗೆ ಹೆಮ್ಮೆ. ಕಾಳಿಂಗ ನಾವಡ ನನ್ನ ಪ್ರೀತಿಯ ಚಿಕ್ಕಪ್ಪ. ಅವರೊಂದಿಗಿನ ಬಾಂಧವ್ಯ ಎಂದಿಗೂ ಮರೆಯಲಾರದಂಥದ್ದು. ಚಿಕ್ಕವನಾಗಿದ್ದಾಗಿನಿಂದ ಅವರ ಒಡನಾಟದಲ್ಲಿ ಬೆಳೆದ ನನಗೆ ಅವರೊಂದಿಗೆ ಕಳೆದ ಜೀವನದ ಕೆಲವು ಘಟನೆಗಳು ಅಸ್ಮರಣೀಯ.

ಆಗಿನ ಮಳೆಗಾಲದಲ್ಲಿ ಯಕ್ಷಗಾನದ ತಿರುಗಾಟ ಇಲ್ಲದ ಸಮಯದಲ್ಲಿ ನಾನು ಮತ್ತು ನನ್ನ ಅಕ್ಕ ಚಿಕ್ಕಪ್ಪಯ್ಯನ ಜಾದೂ ಪ್ರದರ್ಶನದ ಪ್ರೇಕ್ಷಕರಾಗಿರುತ್ತಿದ್ದೆವು. ಆಗಿನ್ನೂ ವಿದ್ಯುತ್‌ ಸಂಪರ್ಕ ಇರಲಿಲ್ಲ. ಜಿಟಿ ಜಿಟಿ ಮಳೆ, ದೀಪದ ಬೆಳಕಿನಲ್ಲಿ ನಮ್ಮಿಬ್ಬರ ಎದುರು ಅವರು ಮಾಡುತ್ತಿದ್ದ ಜಾದೂ ಚಮತ್ಕಾರಗಳ ನೆನಪು ಇನ್ನೂ ಹಸಿರಾಗಿದೆ. ನಮ್ಮಿಬ್ಬರನ್ನೂ ಚಿಕ್ಕಪ್ಪಯ್ಯ ತಮ್ಮ ದ್ವಿಚಕ್ರ ವಾಹನದಲ್ಲಿ ಮೇಳದ ಯಕ್ಷಗಾನಕ್ಕೆ ಅಪರೂಪಕ್ಕೊಮ್ಮೆ ಕರೆದೊಯ್ಯುತ್ತಿದ್ದರು. ಮುಂದಿನ ಸಾಲಿನಲ್ಲಿ ನಮ್ಮನ್ನು ಕೂಡಿಸಿ "ನಿದ್ದಿ ಮಾಡ್ದೆ ಕಾಣ್' ಅಂತ ಹೇಳಿ ತಮ್ಮ ಗಾನಸುಧೆ ಹರಿಸಲು ತೆರಳುತ್ತಿದ್ದರು. ನಿದ್ದೆ ತಡೆಯಲಾರದೆ ನಾವು ತೂಕಡಿಸುತ್ತಿದ್ದರೆ ತಮ್ಮ ಕಂಚಿನ ಕಂಠದಿಂದ ಹಾಡುವ ಪದ್ಯಗಳಿಂದಲೇ ನಮ್ಮನ್ನು ಎಚ್ಚರಿಸುತ್ತಿದ್ದರು. ನಾವು ಚಿಕ್ಕಪ್ಪಯ್ಯನ ಭಯದಲ್ಲಿ ಕಷ್ಟಪಟ್ಟು ಕಣ್ಣಗಲಿಸಿ ಆಟ ನೋಡುತ್ತಿದ್ದೆವು.

ಕ್ರಿಕೆಟ್‌ ಪ್ರಿಯ ಭಾಗವತ

ಕ್ರಿಕೆಟ್‌ ನನ್ನ ಚಿಕ್ಕಪ್ಪನ ಮೆಚ್ಚಿನ ಕ್ರೀಡೆ. ಆಸ್ಟ್ರೇಲಿಯಾದ ಡೇವಿಡ್‌ ಬೂನ್‌ ಅವರ ಅಚ್ಚುಮೆಚ್ಚಿನ ಆಟಗಾರ. ಮನೆಯ ಅಂಗಳದಲ್ಲಿ ಆಚಾರ್‌ರ ಕೇರಿಯ ಮಕ್ಕಳನ್ನು ಕಟ್ಟಿಕೊಂಡು ನಾವು ಆಡುತ್ತಿದ್ದ ಆ ಕ್ರಿಕೆಟ್‌ನ ಮಜವೇ ಬೇರೆ. ಕ್ರಿಕೆಟ್‌ ಅಂಗಣದಲ್ಲಿ ಡೇವಿಡ್‌ ಬೂನ್‌ನ ಶೈಲಿಯನ್ನೇ ಅನುಕರಿಸುತ್ತಿದ್ದ ಚಿಕ್ಕಪ್ಪಯ್ಯನ ಆ ಠೀವಿ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ವರ್ಲ್ಡ್ಕಪ್‌ ಕ್ರಿಕೆಟ್‌ ನೋಡುವ ಸಲುವಾಗಿಯೇ ಆ ಕೇರಿಗೆ ಪ್ರಥಮವಾಗಿ ಮನೆಗೆ ಟೀವಿ ತಂದಿದ್ದರು. ಕ್ರಿಕೆಟ್‌ ಹಾಗೂ ರಾಮಾಯಣ, ಮಹಾಭಾರತ ಧಾರಾವಾಹಿಗಳನ್ನು ನೋಡಲು ಇಡೀ ಕೇರಿ ಜನ ನಮ್ಮ ಮನೆಯಲ್ಲಿ ಸೇರುತ್ತಿದ್ದರು. ಕ್ರಿಕೆಟ್‌ ನೋಡುವ ಸಂದರ್ಭದಲ್ಲಿ ನನ್ನನ್ನು ಚಿಕ್ಕಪ್ಪ ತಮ್ಮ ಬಳಿ ಕರೆದು ಅವರ ಕಾಲುಗಳನ್ನು ನನ್ನ ತೊಡೆಯ ಮೇಲಿರಿಸಿ ಕಾಲಿನ ಪಾದದ ಗಂಟು ತಿಕ್ಕು ಅನ್ನುತ್ತಿದ್ದರು. ಭಾಗವತಿಕೆ ಮಾಡುವಾಗ ಗಂಟೆಗಟ್ಟಲೆ ಕೂತು ಅವರ ಕಾಲಿನ ಪಾದದ ಗಂಟು ಸೆಳೆಯುತ್ತಿತ್ತು. ಪಾದದ ಗಂಟನ್ನು ತಿಕ್ಕುತ್ತಿದ್ದ ಹಾಗೇ ನಿದ್ರಾದೇವಿ ಅವರನ್ನು ಆವರಿಸುತ್ತಿದ್ದಳು. ನಮ್ಮ ಕುಟುಂಬ ಸಾಗರಕ್ಕೆ ಬಂದು ನೆಲೆಸಿದ ಮೇಲೆ ಸಾಗರದಲ್ಲಿ ಯಕ್ಷಗಾನ ಇರುವಾಗಲೆಲ್ಲ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಅವರು ಮನೆಗೆ ಬಂದರೆಂದರೆ ನಮಗೇನೋ ಸಂಭ್ರಮ. ತಿಳಿ ಸಾರು ಅನ್ನ ಇದ್ದರೆ ಅವರಿಗೆ ಪಂಚಭಕ್ಷ್ಯ ಪರಮಾನ್ನ.

ಯಕ್ಷಗಾನದ ಅಭಿಮಾನಿಗಳು ಕಾಳಿಂಗ ನಾವಡರನ್ನು ಎಷ್ಟು ಆರಾಧಿಸುತ್ತಿದ್ದರು ಎಂಬುದಕ್ಕೆ ಇಂದಿಗೂ ಕಾಣುವ ಅವರ ಅಭಿಮಾನಿ ಬಳಗವೇ ಸಾಕ್ಷಿ. ಅವರ ಮೇಲೆ ಜನ ಇಟ್ಟಿರುವ ಅಭಿಮಾನಕ್ಕೆ ಒಂದು ಘಟನೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಸಾಗರದಲ್ಲಿ ಮಲೆನಾಡು ಜಾನಪದ ಕಲಾತಂಡ ಎಂಬ ಸಾಂಸ್ಕೃತಿಕ ತಂಡವನ್ನು ನನ್ನ ಸ್ನೇತರೊಂದಿಗೆ ಕಟ್ಟಿಕೊಂಡು ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದವು. ಸಾಗರದ ಸಮೀಪದ ಹಳ್ಳಿಯೊಂದರಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ನಿರೂಪಕರು ನನ್ನನ್ನು ಕಾಳಿಂಗ ನಾವಡರ ಅಣ್ಣನ ಮಗ ಎಂದು ಪರಿಚಯಿಸಿದ್ದರು.

ಕಾರ್ಯಕ್ರಮ ಮುಗಿದಾಗ ಮಧ್ಯರಾತ್ರಿಯಾಗಿತ್ತು. ಆಗ ಯಾರೋ ಒಬ್ಬರು ನನ್ನನ್ನು ಹುಡುಕಿಕೊಂಡು ಬಂದು "ಕಾಳಿಂಗ ನಾವಡರಂತೂ ನಮ್ಮ ಮನೆಗೆ ಬರಲಿಲ್ಲ. ದಯಮಾಡಿ ನೀವಾದರೂ ಬರಬೇಕು' ಎಂದು ಗೋಗರೆದರು. ಈ ಸರಿರಾತ್ರಿಯಲ್ಲಿ ನಿಮಗ್ಯಾಕೆ ತೊಂದರೆ ಎಂದರೂ ಕೇಳದೆ ತನ್ನ ಮನೆಗೆ ಕರೆದುಕೊಂಡು ಹೋದರು. ವಿದ್ಯುತ್‌ ಸಂಪರ್ಕವಿಲ್ಲದ ಆ ಪುಟ್ಟ ಮನೆಯಲ್ಲಿ ಮಲಗಿದ್ದ ತನ್ನ ಹೆಂಡತಿಯನ್ನು ಎಬ್ಬಿಸಿ ನಾವಡರು ಬಂದಿದ್ದಾರೆ, ಒಂದು ಲೋಟ ಹಾಲು ಕೊಡು ಎಂದರು. ಅವರ ಹೆಂಡತಿ ಸ್ವಲ್ಪವೂ ಬೇಸರಿಸದೆ ಹಾಲು ತಂದು ಕೊಟ್ಟರು. ಹಾಗೇ ಹಾಲು ಕುಡಿಯುತ್ತಾ ದೇವರ ಮಂಟಪದ ಕಡೆ ಕಣ್ಣು ಹೊರಳಿಸಿದರೆ ದೀಪದ ಬೆಳಕಿನಲ್ಲಿ ಕಾಳಿಂಗ ನಾವಡರ ಭಾವಚಿತ್ರ ಕಾಣಿಸಿತು!

ಆ ಸಾವು ಇಂದಿಗೂ ಯಕ್ಷಪ್ರಶ್ನೆ

ನಾನು ನನ್ನ ಚಿಕ್ಕಪ್ಪನನ್ನೂ, ಅವರ ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ಭಾಗವತನನ್ನೂ ಕಳೆದುಕೊಂಡು 25 ವರ್ಷಗಳು ಕಳೆದರೂ ಆ ದುಃಖ ಇಂದಿಗೂ ಕಾಡುತ್ತಿದೆ. ಮೂವತ್ತರ ಪ್ರಾಯದಲ್ಲೇ ಯಕ್ಷಗಾನದ ಮೇರು ಕಲಾವಿದನಾಗಿ ಬೆಳೆದ ಪ್ರತಿಭಾವಂತನೊಬ್ಬ ಅಷ್ಟೇ ವೇಗದಲ್ಲಿ ಇಹಲೋಕ ತ್ಯಜಿಸಿದ್ದೇಕೆ ಎಂಬುದು ಯಕ್ಷಪ್ರಶ್ನೆಯಾಗೇ ಉಳಿದಿದೆ. ಭಾಗವತಿಕೆಯಲ್ಲಿ ನಾವಡರ ಮನೆ ಹೆಸರಾದದ್ದು. ಆದರೆ ಅದ್ಯಾವ ಕ್ಷಣದಲ್ಲಿ ಅವರಿಗೆ ಯಕ್ಷಗಾನದ ಕುರಿತಾಗಿ ಭ್ರಮನಿರಸನವಾಯೊ ಗೊತ್ತಿಲ್ಲ. ಅಥವಾ ಯಾರ ಮಾತು, ಕಲಾ ಕ್ಷೇತ್ರದ ರಾಜಕೀಯ ಅವರಿಗೆ ಬೇಸರ ಮೂಡಿಸಿತ್ತೋ ತಿಳಿಯದು. "ಇದು ನನ್ನ ಕಾಲಕ್ಕೇ ಸಾಕು. ನೀನು ಯಕ್ಷಗಾನ ಕಲಿಯುವುದು ಬೇಡ' ಎಂದು ಖಂಡತುಂಡವಾಗಿ ನನಗೆ ಹೇಳಿದ್ದರು. ಆದರೂ ಜಾನಪದ ಭಾವಗೀತೆ ಹಾಡುತ್ತಾ ಯಕ್ಷಗಾನದಲ್ಲಲ್ಲದಿದ್ದರೂ ಆ ಮನೆಯ ಗಾಯನ ಪರಂಪರೆಯನ್ನು ಮುಂದುವರೆಸುತ್ತಿರುವ ನನಗೆ ನನ್ನ ಮೆಚ್ಚಿನ ಕವಿ ದಿ.ಗೋಪಾಲಕೃಷ್ಣ ಅಡಿಗರ ಈ ಕವನದ ಸಾಲುಗಳು ವಿಧಿಯ ಅಟ್ಟಹಾಸವನ್ನು ಅಣಕಿಸುತ್ತಿರುವಂತೆ ಭಾಸವಾಗುತ್ತದೆ.

ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿ ದೋಣಿ
ಬಾಳ ಗಂಗೆಯ ಮಹಾಪೂರದೊಳು
ಸಾವಿನೊಂದು ವೇಣಿ



*********************
ಕೃಪೆ : udayavani


ಚಿತ್ರ ಕೃಪೆ : ಸುದೇಶ್ ಶೆಟ್ಟಿ


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Sakaram Shetty(8/14/2015)
ಯಕ್ಷಗಾನ ಕಲೆಗೆ ಹೊಸ ರಂಗು ಕೊಟ್ಟವರು ಕಾಳಿಂಗ ನಾವಡರು, ಯಕ್ಷಗಾನ ನೋಡಲು ಉದಾಸಿನ ಮಾಡುತ್ತಿದ ಜನರು ಇವರ ಭಾಗವತಿಗೆಯ ನಂತರದ ದಿನಗಳಲ್ಲಿ ಬಹಳ ಆಸಕ್ತಿ ಯಿಂದ ಯಕ್ಷಗಾನದ ಕಡೆಗೆ ವಾಲಿದರು ಎಂದು ನನ್ನ ಅನಿಸಿಕೆ.
Mahadeva Shastry(8/14/2015)
Sakaram shetty. ನೀವು ಸರಿಯಾಗಿ ಹೇಳಿದ್ದೀರಿ.. ಕ್ಯಾಸೆಟ್ ನಲ್ಲಿ ಭಾಗವತಿಕೆ ಮಾತ್ರ ಕೇಳುವ ಪರಿಪಾಠ... ಪ್ರಾರಂಭ ಇವರಿಂದ
Dinesh Naik(8/14/2015)
GREAT YAKSHA ICON
Mahadeva Shastry(8/12/2015)
ಕೊನೆ ಕೊನೆಗೆ.ಹೌಸ್ ಪುಲ್..ಮೂವತ್ತು ನಲುವತ್ತು ಕೀಮೀ ಯಿಂದ ಆ ಕಾಲದಲ್ಲಿ ಬರುತ್ತಿದ್ದರು. ಹಿಮ್ಮೇಳ.. ಕ್ಕೆ ಗಮನ ಹರಿದದ್ದು ಇವರಿಂದಲೆ.. ಯುವ ಜನತೆ. ಆ ಕಾಲದಲ್ಲಿ ಕಾಳಿಂಗ ನಾವುಡ ಪ್ರವೇಶ ದ ನಂತರವೇ.. ತೆಂಕಿನ ಭಾಗವತರನ್ನ ಗಮಸಿದ್ದೋ ಅಂತ ನನಗನಿಸಿತ್ತು. ಇದನ್ನ ಎಲ್ಲರೂ ಒಪ್ಪಲಿಕ್ಕಿಲ್ಲಾ.. ಆದರೆ ನಾನು ಹಾಗೆ.... ಅನ್ನಬಹುದು.. ಮತ್ತೆ.. ಕೆರೆಮನೆ ಶಂಭು ಹೆಗ್ಗಡೆಯವರಿಗೂ ಸಾಕಷ್ಟು ಜನಪ್ರಿಯತೆ ಇತ್ತು.. ಅವರ ಮೇಳದವರಿಗೆ ಹಾಗು.ನಂತರೆ ಚಿಟ್ಟಾಣಿ. ಜಲವಳ್ಳೀ ಯವರಿದ್ದರು.
Mahadeva Shastry(8/12/2015)
thanks, ನಮ್ಮ ಪರಂಪರೆ ಯಕ್ಷಗಾನ.. ಶತಮಾನದಿಂದ.. ತೆಂಕು. ತಿಟ್ಟಿನ ಬ್ರಹ್ಮ ರೆಂದು ಖ್ಯಾತಿಯ ಕುರಿಯ ವಿಠಲ ಶಾಸ್ತ್ರಿಯ್ ನಮ್ಮ ಕುಟುಂಬದವರು. ನನ್ನ ಮಗ ತೆಂಕಿನ ಕಲಾವಿದರಲ್ಲಿ ಬಣ್ಣದವೇಷದಲ್ಲಿ ಮೆಚ್ಚುಗೆ ಗಳೀಸುತ್ತಿದ್ದಾನೆ..ಪುತ್ತೂರು ಶ್ರೀಧರ ಭಂಡಾರಿ ಶಿಷ್ಯ...
Keerthan HB Halady(8/12/2015)
Mahadeva Shastry ಅವರೆ ಅನುಭವ ಅಮ್ರತವನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು...ನಾವಡರ ಆಟಕ್ಕೆ ಆವಾಗ ಜನ ಎಷ್ಟು ಸೇರುತ್ತಿದ್ದರು?
Suresh Shetty(8/12/2015)
Mahadeva Shastry sir, you have commented such a nice moment which I always tried to convince my friends, relatives throughout my life.
Mahadeva Shastry(8/12/2015)
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ದ ಗದ್ದೆಯಲ್ಲಿ ಇವರಿದ್ದ ಮೇಳದ ಆಟದಲ್ಲಿ ಇವರು ಮಧ್ಯ ರಾತ್ರೆ ರಂಗಸ್ಥಳ ದಲ್ಲಿ ಕೂರುವಾಗ .. ಮುಂದಿದ್ದ ಕಲಾವಿದ ಕಸಿವಿಸಿ ಗೊಳುವಂಗೆ,,.... ಐದು ನಿಮಿಷ ಕ್ಕಿಂತಲೂ ಹೆಚ್ಚು ಸಮಯ.. ದ ಸುಧೀರ್ಘ ಕರತಾಡನ .. ಚಾ ಕುಡಿಯಲು ಹೊರ ಹೋದವರು"" ನಾವುಡರು ಕುಳಿತರಂತೆ "" ಎಂದು.. ಕೂತವರ ಕಾಲು ಮೆಟ್ಟಿ ಬೈಗಳು ತಿಂದುಕೊಂಡು ಧಾವಿಸುವುದನ್ನ ನಾನು ಕಂಡಿದ್ದೆ.. ಸೋನಿ ಟೇಪ್ ರೆಕಾರ್ಡಗಳನ್ನ ಕಂಡರೆ...ನಾವುಡ ಹಾಡಿದೆಯಾ ಎನ್ನುವುದು .. ಯಾವುದೇ ಹಳ್ಳಿಯಲ್ಲಿ ಯಕ್ಷಗಾನ ನಡೆದರೂ ಬೆಳಗ್ಗೆ ಕಿವಿ ಗಡ ಚಿಕ್ಕುವಂತೆ ಎಜ್ಡಿ ,ಬುಲೆಟ್ ಬೈಕುಗಳು ಗುಡು ಗುಡುಸುತ್ತಾ ಮನೆಗೆ ಧಾವಿಸುವುದು ಸಾಮಾನ್ಯ ದೃಶ್ಯ ವಾಗಿತ್ತು. ಸಿನೇಮಾ ಹಾಡುಗಳನ್ನ ಮರೆತು ಯುವ ಜನರು ಯಕ್ಷಗಾನದತ್ತ ಒಲಿದದ್ದು.. ಇವರಿಂದ ಎಂದು ನಮಗನಿಸಿತ್ತು. ಬಡಗಿನಲ್ಲಿ ಹೋಗಿ ವಿಜೃಂಬಿಸಿದ್ದ ಕುರಿಯ ವಿಠಲ ಶಾಸ್ತ್ರಿಗಳಂತೆ .. ಇಲ್ಲಿ ತೆಂಕಿನಲ್ಲಿ ಇವರು ರಂಜಿಸಿದರು. ತೆಂಕು ಬಡಗು ಇಲ್ಲಿ ಒಂದಾಗಿತ್ತು.
Sateesh Shanubogh(8/12/2015)
Gana kogile Navadare nive Great




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ